ಕಳಚುರಿಗಳು

 ಕ್ರಿ.ಶ. 3 ನೆಯ ಶತಮಾನದಿಂದ ಸು. 1,200 ವರ್ಷಕಾಲ ಭಾರತದ ಚರಿತ್ರೆಯಲ್ಲಿ ಪಾತ್ರವಹಿಸಿದ ಮನೆತನದ ಅರಸರು. ಇವರು ಬೇರೆ ಬೇರೆ ರಾಜಧಾನಿಗಳಿಂದ ಆಳಿದರು. ಈ ವಂಶದ ಅತ್ಯಂತ ಪ್ರಾಚೀನ ಶಾಖೆ ಮಾಳ್ವ, ಗುಜರಾತ್ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ 6ನೆಯ ಶತಮಾನದಲ್ಲಿ ಅಧಿಕಾರದಲ್ಲಿತ್ತು ಇವರಿಗೆ ಹೈಹಯರೆಂದು ಹೆಸರಿತ್ತು. ಇವರ ರಾಜಧಾನಿ ಯಾವುದೆಂದು ತಿಳಿದಿಲ್ಲವಾದರೂ ಶಾಸನಗಳನ್ನು ಉಜ್ಜಯಿನಿ, ವಿದಿಶ, ಆನಂದಪುರ (ಗುಜರಾತ್) ಮೊದಲಾದ ಸ್ಕಂಧಾವಾರಗಳಿಂದ ಹೊರಡಿಸಲಾಗಿತ್ತು. ನಿರ್ದಿಷ್ಟವಾಗಿ ತಿಳಿದು ಬಂದಿರುವ ರೀತ್ಯಾ ಕಳಚುರಿ ವಂಶಗಳಲ್ಲಿ ಮಾಹಿಷ್ಮತೀ, ತ್ರಿಪುರಿ, ಸರಯುಪಾರ, ರತ್ನಪುರ ಮತ್ತು ಕಲ್ಯಾಣಗಳಲ್ಲಿ ಆಳಿದ ರಾಜರು ಪ್ರಮುಖರು. ಕಳಚುರಿ ಎಂಬ ಶಬ್ದ ಕಟಚ್ಚುರಿ, ಕಲತ್ಸೂರಿ, ಕಳಚೂರ್ಯ, ಕಲಚ್ಚುಟಿ ಮುಂತಾದ ವಿವಿಧ ರೂಪಗಳಲ್ಲಿ ಕಾಣಬರುತ್ತದೆ.

ಮಾಹಿಷ್ಮತೀ ಕಳಚುರಿಗಳು : ಇವರು ಪ್ರಬಲರಾದದ್ದು 6ನೆಯ ಶತಮಾನದ ಉತ್ತರಾರ್ಧದಲ್ಲಿ. ಇವರ ರಾಜ್ಯ ಆಗ ಉತ್ತರ ಮಹಾರಾಷ್ಟ್ರ, ಗುಜರಾತ್ ಮತ್ತು ಮಾಳ್ವದ ಕೆಲವು ಭಾಗಗಳನ್ನೊಳಗೊಂಡಿತ್ತು. ಕೃಷ್ಣರಾಜ (550-575), ಅವನ ಮಗ ಶಂಕರಗಣ, ಮೊಮ್ಮಗ ಬುದ್ಧರಾಜ-ಈ ಮೂವರು ಕಳಚುರಿ ರಾಜರು ಈ ಕಾಲದಲ್ಲಿ ಆಳಿದವರೆಂದು ಶಾಸನಗಳಿಂದ ತಿಳಿಯುತ್ತದೆ. ಪರಮ ಮಾಹೇಶ್ವರ ಕೃಷ್ಣರಾಜ ಎಂಬ ಶಾಸನವುಳ್ಳ ಮತ್ತು ನಂದಿಯ ಚಿತ್ರವುಳ್ಳ ಬೆಳ್ಳಿಯ ನಾಣ್ಯಗಳು ಗುಜರಾತ್, ಕೊಂಕಣ, ರಾಜಸ್ಥಾನ, ಮಾಳ್ವ, ವಿದರ್ಭ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ದೊರಕಿರುವುದರಿಂದ ಇವನ ರಾಜ್ಯ ಎಷ್ಟು ವಿಸ್ತಾರವಾಗಿತ್ತೆಂಬುದು ಗೊತ್ತಾಗುತ್ತದೆ. ಕೃಷ್ಣರಾಜನ ಮಗ ಶಂಕರಗಣ ಶಕ್ತನಾದ ದೊರೆ. ಇವನ ಕಾಲ (575-600). ಮಂಡಸರದ ಔಲಿಕವಂಶದ ಅರಸರನ್ನು ಶಂಕರಗಣ ಸೋಲಿಸಿದ. ನಾಸಿಕ ಜಿಲ್ಲೆಗೆ ಸೀಮಿತವಾಗಿದ್ದ ಕಳಚುರಿ ಪ್ರಭಾವವನ್ನು ಗುಜರಾತ್ ಮತ್ತು ಕಾಠಿಯಾವಾಡಗಳಿಗೆ ಹರಡಿದ ಕೀರ್ತಿ ಇವನಿಗೆ ಸೇರುತ್ತದೆ. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಅನೇಕ ಭಾಗಗಳು ಇವನ ಶಾಸನಗಳಲ್ಲಿ ಕಾಣುವುದರಿಂದ, ಶಂಕರಗಣ ಗುಪ್ತ ರಾಜರ ಅಧೀನದಲ್ಲಿದ್ದ ಉತ್ತರ ಭಾರತದ ಭಾಗಗಳನ್ನು ಗೆದ್ದುಕೊಂಡಿರಬಹುದು. ಕ್ರಿ. ಶ. 597 ರ ಉಜ್ಜಯಿನಿ ಶಾಸನ ಇವನನ್ನು ಪೂರ್ವಾಪರ ಸಮುದ್ರಾಂತಾದಿ ದೇಶ ಸ್ವಾಮಿ-ಎಂದು ಕರೆದಿದೆ. ಸು. 600ರಲ್ಲಿ ಶಂಕರಗಣನ ಮಗ ಬುದ್ಧರಾಜ ದೊರೆಯಾದ. 608ರ ವದ್ನೇರ್ ಶಾಸನದಿಂದ ಬುದ್ಧರಾಜ ದೇವಗುಪ್ತನೆಂಬ ರಾಜನಿಂದ ಪೂರ್ವ ಮಾಳ್ವವನ್ನು ಗೆದ್ದುಕೊಂಡನೆಂದು ತಿಳಿಯುತ್ತದೆ. ಬಾದಾಮಿ ಚಾಳುಕ್ಯ ದೊರೆ ಮಂಗಳೇಶನಿಂದ ಬುದ್ಧರಾಜ 602 ರಲ್ಲಿ ಬಹುಶಃ ಸಂಪೂರ್ಣವಾಗಿ ಸೋತು ಹೋದ. ಇದರಿಂದ ಕಳಚುರಿಗಳ ಪ್ರಭಾವ ಕಡಿಮೆಯಾಗಿ, ಚಾಳುಕ್ಯರು ಉತ್ತರದಲ್ಲಿ ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಅನೂಕೂಲವಾಯಿತು. ಬುದ್ಧರಾಜನ ಮರಣದೊಡನೆ (620) ಮಾಹಿಷ್ಮತೀ ನಗರದ ಕಳಚುರಿಗಳ ಅವನತಿ ಪ್ರಾರಂಭವಾಯಿತು. ಚಾಳುಕ್ಯ ವಿನಯಾದಿತ್ಯ ತನ್ನ ಶಾಸನದಲ್ಲಿ ಹೈಹಯರನ್ನು ಸೋಲಿಸಿದುದಾಗಿ ಹೇಳಿರುವುದರಿಂದ, ಬುದ್ಧರಾಜನ ಅನಂತರವೂ ಹಲವರು ಆಳುತ್ತಿದ್ದಿರಬೇಕು. ಈ ವಂಶದ ರಾಜಕುಮಾರಿಯರಾದ ಲೋಕ ಮಹಾದೇವಿಯನ್ನೂ ಅವಳ ತಂಗಿ ತ್ರೈಲೋಕ್ಯ ಮಹಾದೇವಿಯನ್ನೂ 2 ನೆಯ ವಿಕ್ರಮಾದಿತ್ಯ ವಿವಾಹವಾಗಿದ್ದ.

ತ್ರಿಪುರಿಯ ಕಳಚುರಿಗಳು : ಕಳಚುರಿ ಶಾಖೆಗಳಲ್ಲೆಲ್ಲ ಅತ್ಯಂತ ಪ್ರಬಲರಾಗಿದ್ದವರು ಇವರು. ತ್ರಿಪುರಿ ಈಗಿನ ಜಬ್ಬಲ್‍ಪುರದ ಸಮೀಪದಲ್ಲಿದೆ. ಈ ಕಳಚುರಿಗಳು 675 ರಿಂದಲೇ ಆಳಲು ಪ್ರಾರಂಭಿಸಿದರೆಂದು ಕೆಲವರ ಮತ. ಆದರೆ 1 ನೆಯ ಕೊಕಲ್ಲ (850-890) ಈ ಶಾಖೆಯ ಮುಖ್ಯನಾದ ಮೊದಲ ರಾಜ. ಪ್ರತೀಹಾರ ದೊರೆ 1 ನೆಯ ಭೋಜನ ಮೇಲೆ ಕೊಕಲ್ಲ ದಂಡೆತ್ತಿಹೋದ. ಭೋಜನ ಸಾಮಂತರಾಗಿದ್ದ ಸರಯುಪಾರದ ಶಂಕರಗಣ, ಗುಹಿಲ ಹರ್ಷರಾಜ, ಜಾಹಮಾನಗೂವಕ-ಇವರೆಲ್ಲರನ್ನು ಈತ ಸೋಲಿಸಿದ. ಪೂರ್ವದಲ್ಲಿ ಬಂಗಾಳದ ವರೆಗೂ ದಂಡಯಾತ್ರೆ ನಡೆಸಿದ. ಅನಂತರ ಕೊಂಕಣದಲ್ಲಿ ಆಳುತ್ತಿದ್ದ ಶಿಲಾಹಾರ ಕಪರ್ದಿಯನ್ನು ಸೋಲಿಸಿ, ರಾಷ್ಟ್ರಕೂಟ 2 ನೆಯ ಕೃಷ್ಣನ ಮೇಲೂ ದಂಡೆತ್ತಿಹೋದ. ಈ ಯುದ್ಧದಲ್ಲೂ ಕೊಕಲ್ಲ ಜಯಶಾಲಿಯಾದ. ರಾಷ್ಟ್ರಕೂಟ 2 ನೆಯ ಕೃಷ್ಣ ಅನಂತರ ಕೊಕಲ್ಲನೊಡನೆ ಸ್ನೇಹ ಬೆಳೆಸಿ ಅವನ ಮಗಳನ್ನು ವಿವಾಹವಾದ. ಈ ಎಲ್ಲ ವಿಜಯಗಳಿಂದ ಕಳಚುರಿಗಳ ರಾಜ್ಯ ವಿಸ್ತರಣೆಯಾಗಲಿಲ್ಲವಾದರೂ ಅವರ ಪ್ರಾಬಲ್ಯ ಹೆಚ್ಚಿತು. ಕೊಕಲ್ಲನ ಮರಣಾನಂತರ ಅವನ ಮಗ ಶಂಕರಗಣ ರಾಜನಾದ. ಈತ ಕೋಸಲದಲ್ಲಿ ಆಳುತ್ತಿದ್ದ ಸೋಮವಂಶೀ ರಾಜನನ್ನು ಸೋಲಿಸಿದ. ಅಷ್ಟರಲ್ಲಿ ರಾಷ್ಟ್ರಕೂಟ 2 ನೆಯ ಕೃಷ್ಣ ಪೂರ್ವ ಚಾಳುಕ್ಯರಾಜ ವಿಜಯಾದಿತ್ಯನ ಮೇಲೆ ಯುದ್ಧ ಮಾಡಲು ಶಂಕರಗಣನ ಸಹಾಯ ಕೋರಿದ. ಆದರೆ ರಾಷ್ಟ್ರಕೂಟ ಮತ್ತು ಕಳಚುರಿಗಳನ್ನು ವಿಜಯಾದಿತ್ಯ ಸೋಲಿಸಿದ. 2 ನೆಯ ಕೃಷ್ಣನ ಮಗ ಜಗತ್ತುಂಗ ಶಂಕರಗಣನ ಮಗಳಾದ ಲಕ್ಷ್ಮಿಯನ್ನು ವಿವಾಹವಾದ. ಶಂಕರಗಣನ ಮರಣಾಂತರ ಅವನ ಮಗನಾದ ಯುವರಾಜ (915-945) ರಾಜನಾದ.

 ಪಾಲರಾಜನನ್ನು ಯುವರಾಜ ಸೋಲಿಸಿ ಕಳಿಂಗದ ಮೇಲೆ ದಂಡಯಾತ್ರೆ ನಡೆಸಿದ. ರಾಷ್ಟ್ರಕೂಟರು ಯುವರಾಜನನ್ನು ಸಂಪೂರ್ಣವಾಗಿ ಸೋಲಿಸಿದರು. ಯುವರಾಜ ತನ್ನ ಮಗಳು ಕುಂದದೇವಿಯನ್ನು 3 ನೆಯ ಅಮೋಘವರ್ಷನಿಗೆ ವಿವಾಹ ಮಾಡಿಕೊಟ್ಟ. 3 ನೆಯ ಕೃಷ್ಣ ಈಕೆಯ ಮಗನಾದರೂ, ತನ್ನ ಸೋದರಮಾವ ಯುವರಾಜನ ಮೇಲೆ ಯುದ್ಧ ಮಾಡಿ ಅವನನ್ನು ಸಂಪೂರ್ಣವಾಗಿ ಸೋಲಿಸಿದ. ಕಳಚುರಿರಾಜ್ಯ ರಾಷ್ಟ್ರಕೂಟ ರಾಜ್ಯದಲ್ಲಿ ಲೀನವಾಗಿ ಹೋಗುವ ಪರಿಸ್ಥಿತಿ ಬಂದೊದಗಿತು. ಅಷ್ಟರಲ್ಲಿ ಯುವರಾಜ ಸೈನ್ಯವನ್ನು ಸಿದ್ಧಪಡಿಸಿಕೊಂಡು ರಾಷ್ಟ್ರಕೂಟರನ್ನು ಡಾಹಲ ದೇಶದಿಂದ ಓಡಿಸಿ, ತನ್ನ ರಾಜ್ಯವನ್ನು ಬಲಪಡಿಸಿಕೊಂಡ. ಯುವರಾಜ ಧಾರ್ಮಿಕ ವಿಷಯಗಳಲ್ಲೂ ವಿಶೇಷ ಆಸಕ್ತಿ ವಹಿಸಿದ್ದ. ಗೋಲಕಿ ಮಠಕ್ಕೆ ಆಶ್ರಯದಾತನಾಗಿದ್ದುದಲ್ಲದೆ, ಅನೇಕ ಶೈವ ದೇವಾಲಯಗಳನ್ನು ನಿರ್ಮಿಸಿದ. ಯುವರಾಜನ ಅನಂತರ ಅವನ ಮಗ ಲಕ್ಷ್ಮಣರಾಜ (945-970) ರಾಜನಾದ. ಈತ ಪೂರ್ವದಲ್ಲಿ ವಂಗರಾಜ್ಯದಲ್ಲಿ ಆಳುತ್ತಿದ್ದ ಚಂದ್ರವಂಶದ ರಾಜನನ್ನೂ ಓಡ್ರ ರಾಜನನ್ನೂ ಕೋಸಲದ ಮಹಾಭವಗುಪ್ತನನ್ನೂ ಸೋಲಿಸಿದ. ಪಶ್ಚಿಮದಲ್ಲಿ ಲಾಟರಾಜ, ಚಾಳುಕ್ಯ ಮೂಲರಾಜ, ಅಭೀರರಾಜ ಗೃಹರಿಪು ಮುಂತಾದವರನ್ನು ಸೋಲಿಸಿದ. ಲಕ್ಷ್ಮಣರಾಜ ತನ್ನ ಮಗಳು ಬೊಂತಾದೇವಿಯನ್ನು ಚಾಳುಕ್ಯ 4 ನೆಯ ವಿಕ್ರಮಾದಿತ್ಯನಿಗೆ ವಿವಾಹ ಮಾಡಿಕೊಟ್ಟ. ಇವಳ ಮಗನೇ ಚಾಳುಕ್ಯ 2 ನೆಯ ತೈಲಪ. ಲಕ್ಷ್ಮಣ ರಾಜನ ಮಗ ಶಂಕರಗಣ ಸ್ವಲ್ಪ ಕಾಲ ಆಳಿದಮೇಲೆ ಅವನ ತಮ್ಮ 2 ನೆಯ ಯುವರಾಜ (980-990) ರಾಜನಾದ. ಈತ ಅಸಮರ್ಥ ದೊರೆ. ತನ್ನ ಸೋದರಮಾವ ಯುವರಾಜನ ಮೇಲೆ ತೈಲಪನೂ ಯುದ್ಧ ಮಾಡಿದ. ಪರಮಾರ ಮುಂಜ ಯುವರಾಜನನ್ನು ಪೂರ್ಣವಾಗಿ ಸೋಲಿಸಿದ. ಯುವರಾಜ ಸೋತು ಓಡಿಹೋದ. ಹೀಗಾಗಿ ಕಳಚುರಿಗಳ ಪ್ರಾಬಲ್ಯ ಅಧೋಮುಖವಾಯಿತು. ಆದರೆ ಇವನ ಮಗ 2 ನೆಯ ಕೊಕಲ್ಲನ (990-1015) ಶಕ್ತಿಸಾಮಥ್ರ್ಯಗಳಿಂದ ಕಳಚುರಿಗಳ ಪ್ರಾಬಲ್ಯ ವೃದ್ಧಿಗೊಂಡಿತು. ಈತ ಗೂರ್ಜರರ ಮೇಲೆ ದಂಡೆತ್ತಿಹೋಗಿ ಮೂಲರಾಜನನ್ನು ಅಥವಾ ಅವನ ಮಗ ಚಾಮುಂಡರಾಜನನ್ನು ಸೋಲಿಸಿದ. ತನ್ನ ತಂದೆಯನ್ನು ಸೋಲಿಸಿದ್ದ ಚಾಳುಕ್ಯ ತೈಲಪನನ್ನೂ ಈತ ಪರಾಜಯಗೊಳಿಸಿದ. ಪಾಲರಾಜ 1 ನೆಯ ಮಹೀಪಾಲನೂ ಇವನಿಂದ ಸೋತ. ಈ ಎಲ್ಲ ವಿಜಯಗಳಿಂದ ಕಳಚುರಿ ಸಾಮ್ರಾಜ್ಯ ಪುನಃ ವರ್ಧಿಸಿತು.

 2 ನೆಯ ಕೊಕಲ್ಲನ ಮಗ ಗಾಂಗೇಯದೇವ (1015-1041) ಶಕ್ತನಾದ ದೊರೆಯಾಗಿದ್ದ. ಇವನ ಕಾಲದಲ್ಲಿ ಕಳಚುರಿಗಳ ಪ್ರಾಬಲ್ಯ ಹೆಚ್ಚಿತು. ಈತ ರಾಜೇಂದ್ರ ಚೋಳ ಮತ್ತು ಪರಮಾರ ಭೋಜರೊಡಗೂಡಿ ಚಾಲುಕ್ಯ 2 ನೆಯ ಜಯಸಿಂಹನ ಮೇಲೆ ಯುದ್ಧ ಮಾಡಿದ. ಆದರೆ ಇದರಿಂದ ಏನೂ ಉಪಯೋಗವಾಗಲಿಲ್ಲ. ಅನಂತರ ಗಾಂಗೇಯದೇವ ಕೋಸಲಕ್ಕೆ ಹೋಗಿ ಮಹಾ ಶಿವಗುಪ್ತನನ್ನು ಸೋಲಿಸಿದ. ರತ್ನಪುರಿಯ ಕಳಚುರಿ ದೊರೆ ಕಮಲರಾಜನ ಸಹಾಯದಿಂದ ಉತ್ಕಲ ರಾಜ್ಯವನ್ನು ಗೆದ್ದು ತ್ರಿಕಲಿಂಗಾಧಿಪತಿ ಎಂಬ ಬಿರುದನ್ನು ಧರಿಸಿದ. ಚಂಡೆಲ್ಲ ಧಂಗರಾಜ ಇಲ್ಲವೇ ಮಹೀಪಾಲನನ್ನು ಸೋಲಿಸಿ ಕಾಶಿ ಮತ್ತು ಪ್ರಯಾಗಗಳನ್ನು ತನ್ನ ವಶಮಾಡಿಕೊಂಡ. ಪೂರ್ವದಲ್ಲಿ ಅಂಗರಾಜ್ಯದ ಮೇಲೆ ದಂಡಯಾತ್ರೆಯನ್ನು ನಡೆಸಿದ. ಪಂಜಾಬಿನ ಕಾಂಗ್ರಾ ಕಣಿವೆಯಿಂದ ಮಹಮ್ಮದೀಯರನ್ನು ಹೊಡೆದಟ್ಟಿದ. ಆದರೆ ಅವರು ಕಾಶಿಯನ್ನು ಲೂಟಿಮಾಡಿ ಸಂಪತ್ತನ್ನು ದೋಚಿಕೊಂಡು ಓಡಿಹೋದರು. ಪ್ರಯಾಗ ಇವನ ಉಪರಾಜಧಾನಿಯಾಗಿತ್ತು. ಈತ ಚಿನ್ನ, ಬೆಳ್ಳಿ ಮತ್ತು ತಾಮ್ರಗಳ ನಾಣ್ಯಗಳನ್ನು ಚಲಾವಣೆಗೆ ತಂದಿದ್ದ. ಗಾಂಗೇಯದೇವನ ಅನಂತರ ಅವನ ಮಗ ಕರ್ಣ(1041-1073) ದೊರೆಯಾದ. ಇವನೂ ಒಬ್ಬ ಶಕ್ತ ದೊರೆ. ಈತ ಪ್ರತೀಹಾರಯಶಃಪಾಲನಿಂದ ಅಲಹಾಬಾದನ್ನು ಗೆದ್ದುಕೊಂಡ. ತೀರಪ್ರದೇಶದಲ್ಲಿ ಮುಸ್ಲಿಮರ ಮೇಲೆ ಜಯಗಳಿಸಿದ. ಪಾಲರ ಮೇಲೆ ದಂಡೆತ್ತಿಹೋದರೂ ಅದರಿಂದ ಪ್ರಯೋಜನವಾಗಲಿಲ್ಲ. ಜಾತವರ್ಮನನ್ನು ಸೋಲಿಸಿ ಅಂಗರಾಜ್ಯವನ್ನು ಗೆದ್ದುಕೊಂಡ. ಗಂಗವಂಶದ ವಜ್ರಹಸ್ತನನ್ನೂ ಸೋಲಿಸಿದ. ಚೋಳ ರಾಜಾಧಿರಾಜನನ್ನು ಸೋಲಿಸಿ ಕಾಂಡಿಯ ವರೆಗೂ ದಂಡಯಾತ್ರೆ ನಡೆಸಿದ. ಕರ್ಣನಿಂದ ಪರಾಜಿತನಾದ ಪಂತಲದ ದೊರೆ ಚಾಳುಕ್ಯ, 1 ನೆಯ ಸೋಮೇಶ್ವರನಿರಬೇಕು. ಕರ್ಣ ಅನಂತರ ಚಂಡೆಲ್ಲ ಕೀರ್ತಿವರ್ಮನನ್ನು ಸೋಲಿಸಿ ಸ್ವಲ್ಪಕಾಲ ಬುಂದೇಲ್‍ಖಂಡಕ್ಕೂ ಒಡೆಯನಾಗಿದ್ದ. ಚಾಳುಕ್ಯ ಭೀಮನ ಸಹಾಯದಿಂದ ಮಾಳ್ವದ ಮೇಲೆ ಯುದ್ಧ ಮಾಡಿದ. ಆದರೆ ಚಾಳುಕ್ಯ 6ನೆಯ ವಿಕ್ರಮಾದಿತ್ಯನ ಸಹಾಯದಿಂದ ಪರಮಾರರು ಜಯಶಾಲಿಗಳಾದರು. ಕರ್ಣ ಹಿಂದಿರುಗಬೇಕಾಯಿತು. ಈತ ಹೂಣಕುಲದ ಆವಲ್ಲದೇವಿಯನ್ನು ಮದುವೆಯಾಗಿದ್ದ. ಪಂಡಿತರಿಗೂ ಕವಿಗಳಿಗೂ ಆಶ್ರಯದಾತನಾಗಿದ್ದು 6 ನೆಯ ವಿಕ್ರಮಾದಿತ್ಯನ ಆಸ್ಥಾನ ಕವಿ ಬಿಲ್ಹಣನಿಗೆ ವಿಶೇಷ ಗೌರವ ನೀಡಿದ್ದ. ಕಾಶಿಯ ಕರ್ಣ ಮೇರು ದೇವಾಲಯವನ್ನು ಸ್ಥಾಪಿಸಿ, ಆ ನಗರವನ್ನು ತನ್ನ ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದವನೀತನೇ.

 ಕರ್ಣ ಮುಪ್ಪಿನಲ್ಲಿ ತನ್ನ ಮಗ ಯಶಃಕರ್ಣನಿಗೆ ರಾಜತ್ವ ವಹಿಸಿದ. ಈತ ಚಂಪಾರಣ್ಯ ಮತ್ತು ಆಂಧ್ರದ ಮೇಲೂ ದಾಳಿ ಮಾಡಿದ. ಚಾಳುಕ್ಯ ಜಯಸಿಂಹ ಇವನ ಮೇಲೆ ದಾಳಿ ಮಾಡಿದ. ಚಂದ್ರದೇವ ಯಶಃಕರ್ಣನಿಂದ ಅಲಹಾಬಾದ್ ಮತ್ತು ಕಾಶಿರಾಜ್ಯಗಳನ್ನು ಕಿತ್ತುಕೊಂಡ. ಪರಮಾರ ಲಕ್ಷ್ಮದೇವನಿಂದ ತ್ರಿಪುರಿ ಲೂಟಿಯಾಯಿತು. ಈ ಘಟನೆಗಳು ಕಳಚುರಿಗಳ ಪತನಕ್ಕೆ ಕಾರಣವಾದುವು. ಯಶಃಕರ್ಣನ ಮರಣಾಂತರ ಗಯಾಕರ್ಣ (1123-1153) ರಾಜ್ಯವಾಳಿದ. ಈತನನ್ನು ಚಂಡೆಲ್ಲ ಮದನವರ್ಮ ಸೋಲಿಸಿದ. ಗಯಾಕರ್ಣನ ಅನಂತರ ಅವನ ಮಕ್ಕಳು ನರಸಿಂಹ ಮತ್ತು ಜಯಸಿಂಹ (1163-1188) ಕ್ರಮವಾಗಿ ಆಳಿದರು. ಚಾಳುಕ್ಯ ಕಪೂರಪಾಲ ಮತ್ತು ಮುಸ್ಲಿಮರ ಮೇಲೂ ಜಯಸಿಂಹ ವಿಜಯ ಗಳಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಜಯಸಿಂಹನ ಅನಂತರ ಅವನ ಮಗ ವಿಜಯಸಿಂಹ (1188-1210) ದೊರೆಯಾದ. ಸು. 1211ರ ಸಮಯಕ್ಕೆ ಚಂಡೆಲ್ಲ ತ್ರೈಲೋಕ್ಯವರ್ಮ ಕಳಚುರಿಗಳ ರಾಜ್ಯವಾದ ಡಾಹಲ ಮಂಡಲವನ್ನು ಸ್ವಾಧೀನಪಡಿಸಿಕೊಂಡ. ವಿಜಯಸಿಂಹನಿಗೆ ಅಜಯಸಿಂಹನೆಂಬ ಮಗನಿದ್ದ. ಅವನ ವಿಷಯವೇನೂ ತಿಳಿಯದು. ಒಟ್ಟಿನಲ್ಲಿ 13 ನೆಯ ಶತಮಾನದ ಆದಿಭಾಗದಲ್ಲಿ ತ್ರಿಪುರಿಯ ಕಳಚುರಿಗಳ ಆಳ್ವಿಕೆ ಕೊನೆಗೊಂಡಿತು. ಇವರ ಕಾಲದಲ್ಲಿ ಮತ್ತಮಯೂರಾನ್ವಯದ ಶೈವಾಚಾರ್ಯರು ಕೆಲಕಾಲ ರಾಜಗುರುಗಳಾಗಿದ್ದು ಡಾಹಲದಲ್ಲಿ (ತ್ರಿಪುರಿ) ಗೋಲಕೀ ಮಠವನ್ನು ಸ್ಥಾಪಿಸಿ, ಆ ಮತಪ್ರಚಾರಕಾರ್ಯದಲ್ಲಿ ಆಸಕ್ತಿ ತೋರಿಸಿದರು. ಆಂಧ್ರ ಮತ್ತು ತಮಿಳು ದೇಶಗಳಲ್ಲಿ ಅದರ ಶಾಖೆಗಳು ಸ್ಥಾಪಿತವಾಗಿದ್ದುವು.

ಸರಯೂಪಾರದ ಕಳಚುರಿಗಳು : ಇವರ ಮತ್ತೊಂದು ಶಾಖೆ 8 ನೆಯ ಶತಮಾನದ ಕೊನೆಯ ಭಾಗದಿಂದ 11ನೆಯ ಶತಮಾನದ ವರೆಗೆ ಸರಯೂನದೀ ಪ್ರದೇಶದಲ್ಲಿ (ಈಗಿನ ಗೋಗ್ರಾ) ಆಳುತ್ತಿತ್ತು. ಈ ರಾಜ್ಯವನ್ನು ಸರಯೂಪಾರ ಎಂದು ಶಾಸನಗಳು ಕರೆಯುತ್ತವೆ. ಆದ್ದರಿಂದ ಇವರಿಗೆ ಸರಯೂಪಾರದ ಕಳಚುರಿಗಳೆಂದು ಹೆಸರು ಬಂದಿದೆ.

 7 ನೆಯ ಶತಮಾನದ ಆದಿಭಾಗದಲ್ಲಿದ್ದ ಶಂಕರಗಣ ಈ ವಂಶದ ಮೊದಲ ದೊರೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. 8 ನೆಯ ಶತಮಾನದ ಕೊನೆಯ ಭಾಗದಲ್ಲಿದ್ದ ರಾಜಪುತ್ರ ಈ ವಂಶದ ಮೊದಲ ದೊರೆ ಎಂದು ಮತ್ತೆ ಕೆಲವರ ಮತ. ಇವನು ತುರಗಪತಿ ವಾಹಲಿ ಮತ್ತು ಕಿರೀಟನ್ ಮೊದಲಾದ ರಾಜರನ್ನು ಸೋಲಿಸಿದ. ಪಾಲವಂಶದ ದೊರೆಯಾದ ಧರ್ಮಪಾಲ ರಾಜಪುತ್ರನ ಮೇಲೆ ದಂಡೆತ್ತಿ ಹೋದ. ರಾಜಪುತ್ರ ಧೈರ್ಯದಿಂದ ಕಾದಾಡಿ ಧರ್ಮಪಾಲನನ್ನು ಹೊಡೆದೋಡಿಸಿದ. ಈ ವಿಜಯಗಳಿಂದ ರಾಜಪುತ್ರ ಕಳಚುರಿಗಳ ಪ್ರಾಬಲ್ಯವನ್ನು ಹೆಚ್ಚಿಸಿದ. ಇವನ ಅನಂತರ ಆಳಿದ ಶಿವರಾಜನ ವಿಷಯವೇನೂ ತಿಳಿಯದು. ಅನಂತರ ಆಳಿದ ಇವನ ಮಗ ಶಂಕರಗಣನನ್ನು ತ್ರಿಪುರಿಯ ಕಳಚುರಿ ವಂಶದ ಕೋಕಲ್ಲರಾಜ ಸೋಲಿಸಿದ. ಶಂಕರಗಣನ ಮಗ 1ನೆಯ ಗುಣಸಾಗರ 9ನೆಯ ಶತಮಾನದ ಮಧ್ಯಭಾಗದಲ್ಲಿ ಆಳಿದ. ಈತ ಮಾಡಿದ ಮುಖ್ಯ ಕಾರ್ಯವೆಂದರೆ ಗೌಡದೇಶದ ಮೇಲೆ ಗಳಿಸಿದ ವಿಜಯ. ಪ್ರತೀಹಾರ ಭೋಜನಿಗೆ ಯುದ್ಧಗಳಲ್ಲಿ ಸಹಾಯ ಮಾಡಿದುದರಿಂದ ಸಂತೋಷಗೊಂಡ ಭೋಜನಿಂದ ಇವನಿಗೆ ಬಳುವಳಿಯಾಗಿ ಕೆಲವು ಜಿಲ್ಲೆಗಳು ಬಂದುವು. ಇದರಿಂದ ಸರಯೂಪಾರದ ಕಳಚುರಿಗಳ ರಾಜ್ಯ ಗೋರಖಪುರದ ವರೆಗೂ ವಿಸ್ತಾರವಾಯಿತು.

 ಗುಣಸಾಗರನ ಮರಣಾನಂತರ ಅವನ ಮಕ್ಕಳಾದ ಉಲ್ಲಭ ಮತ್ತು ಭಾಮಾನದೇವ ರಾಜ್ಯವಾಳಿದರು. ಭಾಮಾನದೇವ ಪ್ರತೀಹಾರ ಮಹೀಪಾಲನ ಯುದ್ಧಗಳಲ್ಲಿ ಸಹಾಯಕನಾಗಿದ್ದ. ಭಾಮಾನದೇವನ ಅನಂತರ ಶಂಕರಗಣ, ಮುಗ್ಧತುಂಗ, ಗುಣಸಾಗರ, ಶಿವರಾಜ, ಭಾಮಾನ, ಶಂಕರಗಣ ಎಂಬ ರಾಜರು ಕ್ರಮವಾಗಿ ಆಳಿದರು. ಅನಂತರ, ಅಂದರೆ 11ನೆಯ ಶತಮಾನದ ಆದಿಭಾಗದಲ್ಲಿ, ಆಳಿದವನೇ ಭೀಮ. ಯಾದವೀ ಕಲಹಗಳ ಫಲವಾಗಿ ಈತ ಪದಚ್ಯುತನಾದ. 1055 ರಿಂದ (1080) ರ ವರೆಗೆ ಶೋಧದೇವನೆಂಬವ ರಾಜನಾದ. ಮಹಾರಾಜಾಧಿರಾಜ ಬಿರುದಾಂಕಿತನಾದ ಇವನ ರಾಜ್ಯ ಗೋಗ್ರಾ ಮತ್ತು ಗಂಡಕೀ ನದಿಗಳ ಮಧ್ಯ ಪ್ರದೇಶವನ್ನು ಒಳಗೊಂಡಿತ್ತು. ಈಗ ತಿಳಿದಿರುವಂತೆ ಶೋಢದೇವನೇ (1055-1080) ಸರಯೂಪಾರದ ಕಳಚುರಿಗಳ ಕೊನೆಯ ರಾಜ.

ರತ್ನಪುರದ ಕಳಚುರಿಗಳು: ತ್ರಿಪುರಿಯಲ್ಲಿ ಆಳಿದ ಕಳಚುರಿ ಅರಸ 1 ಯ ಕೋಕಲ್ಲನ ವಂಶಜನಾದ ಕಲಿಂಗರಾಜ ಸು. 1000 ದಲ್ಲಿ ದಕ್ಷಿಣ ಕೋಸಲವನ್ನು ಗೆದ್ದುಕೊಂಡು ತುಮ್ಮಾಣದಲ್ಲಿ (ಮಧ್ಯಪ್ರದೇಶದ ಬಿಲಾಸ್‍ಪುರ ಜಿಲ್ಲೆ) ತ್ರಿಪುರಿ ಕಳಚುರಿಗಳ ಸಾಮಂತನಾಗಿ ಆಳಲು ಪ್ರಾರಂಭಿಸಿದ. ಸು. 1020 ರಲ್ಲಿ ಇವನ ಮಗ ಕಮಲರಾಜ ಪಟ್ಟಕ್ಕೆ ಬಂದ. ಇವನೂ ಸಾಮಂತನಾಗಿದ್ದು ತ್ರಿಪುರಿಯ ಕಳಚುರಿ ರಾಜ ಗಂಗೇಯ ದೇವನ ಯುದ್ದಗಳಲ್ಲಿ ಸಹಾಯಕನಾಗಿದ್ದ. ಇವನ ಮಗನೇ ರತ್ನರಾಜ. ಈತ ರತ್ನಪುರಿ ನಗರವನ್ನು (ಈಗಿನ ರತನ್‍ಪುರ ; ಬಿಲಾಸ್‍ಪುರಕ್ಕೆ 16 ಮೈಲಿ ದೂರ) ಸ್ಥಾಪಿಸಿದ. ರತ್ನರಾಜನ ಮರಣಾಂತರ ಅವನ ಮಗ ಪೃಥ್ವೀದೇವ ರಾಜ್ಯವಾಳಿದ. ಇವನ ಕಾಲದಲ್ಲಿ ರತ್ನಪುರಿ ರಾಜಧಾನಿಯಾದುದರಿಂದ ಇವರನ್ನು ರತ್ನಪುರಿಯ ಕಳಚುರಿಗಳೆಂದು ಕರೆಯಲಾಗಿದೆ. ಪೃಥ್ವೀದೇವನ ಮಗ 1ನೆಯ ಜಾಜಲ್ಲದೇವ ಅತ್ಯಂತ ಪ್ರಖ್ಯಾತನಾದ ದೊರೆ. ಇದೇ ಸಮಯದಲ್ಲಿ ತ್ರಿಪುರಿಯ ಕಳಚುರಿಗಳ ಪ್ರಾಬಲ್ಯ ಕಡಿಮೆಯಾಗುತ್ತಿತ್ತು. ಇದನ್ನು ಗಮನಿಸಿದ 1ನೆಯ ಜಾಜಲ್ಲ (1090-1120) ತ್ರಿಪುರಿಯ ರಾಜ ಯಶಃಕರ್ಣನಿಂದ ಸ್ವತಂತ್ರನಾದ. ದಕ್ಷಿಣ ಕೋಸಲದ ಭಾಗಗಳು ಚಕ್ರಕೋಟೆಯಲ್ಲಿ ಆಳುತ್ತಿದ್ದ ನಾಗವಂಶದ ಸೋಮೇಶ್ವರನ ಆಕ್ರಮಣಕ್ಕೆ ಒಳಗಾಗಿದ್ದುವು. ಜಾಜಲ್ಲ ಅವನನ್ನು ಸೋಲಿಸಿ ಸೆರೆಹಿಡಿದ. ಈತ ಒರಿಸ್ಸದ ಮೇಲೆ ದಂಡೆತ್ತಿಹೋಗಿ ಸುವರ್ಣಪುರದ ಭುಜವಲ ಎಂಬ ರಾಜನನ್ನು ಸೋಲಿಸಿದ. ಇವನ ಪರಾಕ್ರಮವನ್ನು ಗಮನಿಸಿದ ಗಾಹಡವಾಲ ಗೋವಿಂದ ಚಂದ್ರ ಮತ್ತು ಛಂಡೆಲ್ಲ ಸಲ್ಲಕ್ಷಣವರ್ಮರು ಇವನೊಡನೆ ಸ್ನೇಹ ಬೆಳೆಸಿದ್ದರು. ಈ ರೀತಿ ಜಾಜಲ್ಲದೇವ ರತ್ನಪುರಿಯ ಕಳಚುರಿಗಳ ಪ್ರಾಬಲ್ಯ ಹೆಚ್ಚಿಸಿದ.

 ಜಾಜಲ್ಲದೇವನ ಮಗ 2ನೆಯ ರತ್ನದೇವ ದೊರೆಯಾದದ್ದು 1120 ರಲ್ಲಿ. ಪೂರ್ವೀಗಂಗರ ರಾಜ ಅನಂತವರ್ಮ ಚೋಡಗಂಗ ತನ್ನ ರಾಜ್ಯವನ್ನು ವಿಸ್ತರಿಸುವ ಆಸೆಯಿಂದ ಕಳಚುರಿ ರತ್ನದೇವನ ಮೇಲೆ ಯುದ್ಧ ಮಾಡಿದ. ರತ್ನದೇವ ಈ ಯುದ್ಧದಲ್ಲಿ ಜಯಶಾಲಿಯಾದ. ಇವನ ಮರಣಾನಂತರ ದೊರೆಯಾದವ ಇವನ ಮಗ 2ನೆಯ ಪೃಥ್ವೀದೇವ. ಈತ ಜಟೇಶ್ವರನೆಂಬ ರಾಜನನ್ನು ಸೋಲಿಸಿದ. ಪೃಥ್ವೀದೇವನ ಮಗ 2ನೆಯ ಜಾಜಲ್ಲ ರಾಜ್ಯವಾಳಿದ್ದು 1165 ರಿಂದ 1170 ರ ವರೆಗೆ. ಇವನ ಅನಂತರ ಇವನ ಸಹೋದರ ಜಗದ್ದೇವನೂ ಅನಂತರ 3ನೆಯ ರತ್ನದೇವನೂ 3ನೆಯ ಪೃಥ್ವೀದೇವ ಮತ್ತು ಪ್ರತಾಪಮಲ್ಲರೂ ಕ್ರಮವಾಗಿ ರಾಜ್ಯವಾಳಿದರು. ಪ್ರತಾಪ ಮಲ್ಲನ ಕಾಲದಲ್ಲಿ ಪೂರ್ವೀಗಂಗ ಅನಂಗಭೀಮ ಕಳಚುರಿಗಳ ಮೇಲೆ ದಂಡಯಾತ್ರೆ ನಡೆಸಿದ.

 ಪ್ರತಾಪಮಲ್ಲನ ಅನಂತರ ಯಾರು ಆಳಿದರು ಎಂಬುದು ತಿಳಿದಿಲ್ಲ. ಇದೇ ವಂಶದ ವಾಹರ ಎಂಬ ರಾಜ (1480-1525) ಆಳುತ್ತಿದ್ದನೆಂದು ಶಾಸನಗಳಿಂದ ತಿಳಿದು ಬಂದಿದೆ. ಇವನಿಗಿಂತ ಮೊದಲ ರಾಜರ ಹೆಸರುಗಳೂ ಈ ಶಾಸನಗಳಿಂದ ತಿಳಿದುಬರುತ್ತವೆ. 14ನೆಯ ಶತಮಾನದ ಕೊನೆಯಲ್ಲಿ ರತ್ನಪುರಿಯ ಕಳಚುರಿಗಳಲ್ಲಿ ಎರಡು ಭಾಗಗಳಾದುವು. ಒಂದು ಭಾಗ ರತ್ನಪುರಿಯಲ್ಲಿ ಮುಂದುವರಿದರೆ, ಇನ್ನೊಂದು ಶಾಖೆ ರಾಯಪುರದಿಂದ ಆಳಲು ಪ್ರಾರಂಭಿಸಿತು. ರಾಯಪುರದಲ್ಲಿ ರಾಮಚಂದ್ರ ಮತ್ತು ಬ್ರಹ್ಮದೇವ (1402-1415) ಎಂಬ ರಾಜರು ಆಳಿದರೆಂದು ತಿಳಿದುಬಂದಿವೆ. ಇಲ್ಲಿಗೆ ಈ ಶಾಖೆ ಕೊನೆಗೊಂಡಿತು. ವಾಹರನೊಂದಿಗೆ ರತ್ನಪುರಿಯ ಕಳಚುರಿಗಳ ಪತನವೂ ಆಯಿತು.

ಕಲ್ಯಾಣದ ಕಳಚುರಿಗಳು : ಕರ್ಣಾಟಕದಲ್ಲಿಯೂ ಒಂದು ಕಳಚುರಿ ಮನೆತನ ಕಲ್ಯಾಣದ ರಾಜಧಾನಿಯಿಂದ ರಾಜ್ಯಭಾರಮಾಡುತ್ತಿತ್ತು. ಈ ಮನೆತನದ ಹೆಸರು ಕಳಚುರ್ಯಕುಲವೆಂದು ಇವರ ಶಾಸನಗಳಿಂದ ಗೊತ್ತಾಗುತ್ತದೆ. ಇವರು ಕಾಲಂಜರಪುರವರಾಧೀಶ್ವರರೆಂದು ತಮ್ಮ ಶಾಸನಗಳಲ್ಲಿ ಹೇಳಿಕೊಂಡಿದ್ದಾರೆ. ಕಾಲಂಜರಪುರ ಈಗಿನ ಬುಂದೇಲ್ ಖಂಡದ ಕಾಲಂಜರ್. ಇವರು ಅಲ್ಲಿಂದ ದಕ್ಷಿಣಕ್ಕೆ ಯಾವಾಗ ಹೇಗೆ ಬಂದರೆಂಬುದು ಖಚಿತವಾಗಿ ತಿಳಿದಿಲ್ಲವಾದರೂ 1156-57 ರಲ್ಲಿ ಚಾಳುಕ್ಯ ರಾಜ್ಯವನ್ನು ಆಕ್ರಮಿಸಿದ ಬಿಜ್ಜಳನಿಗಿಂತ ಮೊದಲು ಏಳೆಂಟು ತಲೆಮಾರುಗಳ ಅರಸರ ಹೆಸರುಗಳು ಶಾಸನಗಳಲ್ಲಿ ಕಂಡುಬಂದಿರುವುದರಿಂದ ಸು. 10ನೆಯ ಶತಮಾನದಲ್ಲಿ ಇವರು ಕರ್ಣಾಟಕಕ್ಕೆ ಬಂದಿದ್ದಿರಬಹುದು. ಇವರಲ್ಲಿ ಪ್ರಬಲನಾದ ಉಚಿತನೇ ಮೊದಲ ನಾಯಕ. ಇವರು ತಲಕಾಡುನಾಡಿನಲ್ಲಿ ನೆಲೆಸಿ ಮಂಗಳವೇಢೆಯನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದರು. ಈ ವಂಶದ ಜೋಗಮ ತನ್ನ ಪುತ್ರಿ ಸಾವಲದೇವಿಯನ್ನು 6 ನೆಯ ವಿಕ್ರಮಾದಿತ್ಯನಿಗೆ ವಿವಾಹ ಮಾಡಿಕೊಟ್ಟಿದ್ದ. ಇವನ ಮಗ ಪೆರ್ಮಾಡಿ 3ನೆಯ ಸೋಮೇಶ್ವರನ ಸೋದರಿಯನ್ನು ವಿವಾಹವಾಗಿದ್ದ. ಇವರ ಮಗ 2 ನೆಯ ಬಿಜ್ಜಳ 3ನೆಯ ಸೋಮೇಶ್ವರನ ಸೋದರಳಿಯ. ಪೆರ್ಮಾಡಿ 1128 ರಲ್ಲಿ ಚಾಳುಕ್ಯ 3 ನೆಯ ಸೋಮೇಶ್ವರನ ಸಾಮಂತನಾಗಿ ತರ್ದವಾಡಿ (ಬಿಜಾಪುರ ಜಿಲೆ)್ಲ ಪ್ರಾಂತ್ಯವನ್ನು ಆಳುತ್ತಿದ್ದ. ಚಾಳುಕ್ಯ 2 ನೆಯ ಜಗದೇಕಮಲ್ಲ, 3 ನೆಯ ತೈಲ-ಇವರ ಅಧೀನನಾಗಿ 2 ನೆಯ ಬಿಜ್ಜಳ ಅನೇಕ ಪ್ರಾಂತ್ಯಗಳಿಗೆ ಅಧಿಪತಿಯಾಗಿದ್ದ. ಕ್ರಮೇಣ ಪ್ರಬಲನಾಗುತ್ತಿದ್ದ ಬಿಜ್ಜಳ 1142 ರಲ್ಲಿ ಕರಹಾಡ ಪ್ರಾಂತ್ಯವನ್ನು ವಶಪಡಿಸಿಕೊಂಡ. ಐದು ವರ್ಷಗಳ ಅನಂತರ ತರ್ದವಾಡಿ ಇವನ ವಶವಾಯಿತು. 3ನೆಯ ತೈಲನ ಕಾಲದಲ್ಲಿ ಚಾಳುಕ್ಯರು ದುರ್ಬಲರಾದ ಸಮಯವನ್ನು ಸಾಧಿಸಿ ಈತ 1153ರ ವೇಳೆಗೆ ಸ್ವತಂತ್ರ ಮನೋಭಾವ ಪ್ರದರ್ಶಿಸಲಾರಂಭಿಸಿದ. ಐದು ವರ್ಷಗಳೊಳಗೆ ಈತ ರಾಜ್ಯವನ್ನು ಪೂರ್ಣವಾಗಿ ಆಕ್ರಮಿಸಿ ಕಳಚುರ್ಯಚಕ್ರವರ್ತಿ, ಭುಜಬಲ ಚಕ್ರವರ್ತಿ ಮೊದಲಾದ ಬಿರುದುಗಳ ಸಹಿತ ಕಲ್ಯಾಣದಿಂದ ರಾಜ್ಯಭಾರ ಮಾಡತೊಡಗಿದ. 1162 ರ ಕೊನೆಯಲ್ಲಿ 3 ನೆಯ ತೈಲನ ಮರಣಾನಂತರ ಕಳಚುರಿಗಳು ಇಡೀ ಚಾಳುಕ್ಯ ಸಾಮ್ರಾಜ್ಯದ ಅಧಿಕೃತ ಅರಸರೆಂದು ಘೋಷಿಸಿಕೊಂಡರು. ಮರಣಕ್ಕೆ ಮೊದಲು ತೈಲ ತನ್ನ ಮಗ 4 ನೆಯ ಸೋಮೇಶ್ವರನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ್ದ. ಈತ ತನ್ನ ತಮ್ಮಂದಿರೊಡಗೂಡಿ, ಬಳ್ಳಾರಿ ಪ್ರಾಂತ್ಯದಲ್ಲಿ ಆಳುತ್ತಿದ್ದಂತೆ ಕೆಲವು ಶಾಸನಗಳು ತಿಳಿಸುತ್ತವೆ. ವೀರಶೈವ ಮತೋದ್ಧಾರಕ ಬಸವಣ್ಣ ಇವನ ಪ್ರಧಾನನಾಗಿದ್ದನೆಂದು ರಾಜಸ್ಥಾನದಲ್ಲಿ ಪ್ರಬಲನಾಗಿದ್ದ ಆತನಿಗೂ ಸೋದರಳಿಯ ಚನ್ನಬಸವನಿಗೂ ತಮ್ಮ ಮತದ ಪ್ರಚಾರಕ್ಕಾಗಿ ವಿಫುಲ ಅವಕಾಶವಾಯಿತೆಂದೂ ಹೇಳಲಾಗಿದೆ. 1167 ರಲ್ಲಿ ಬಿಜ್ಜಳ ರಾಜ್ಯಸೂತ್ರಗಳನ್ನು ತನ್ನ ಹಿರಿಯ ಮಗ ಸೋವಿದೇವನಿಗೆ (ಸೋಮೇಶ್ವರನಿಗೆ) ಒಪ್ಪಿಸಿದ. ಈ ರೀತಿಯ ರಾಜ್ಯತ್ಯಾಗಕ್ಕೆ ಕಾರಣವೇನೆಂದು ತಿಳಿದಿಲ್ಲ. ಬಹುಶಃ ಪ್ರಬಲನಾಗಿದ್ದ ಬಸವಣ್ಣ ಮತ್ತು ಬಿಜ್ಜಳರ ನಡುವೆ ಮತಭೇದವುಂಟಾಗಿರಬೇಕು. 1168 ರಲ್ಲಿ ಬಿಜ್ಜಳ ಅಸುನೀಗಿದ. ಸೋವಿದೇವ ಅಷ್ಟು ಸಮರ್ಥ ದೊರೆಯಾಗಿರಲಿಲ್ಲ. ಆಗ ಬಿಜ್ಜಳನ ತಮ್ಮ ಮೈಳುಗಿ ಮತ್ತು ಮೊಮ್ಮಗ ಕರ್ಣದೇವ ರಾಜ್ಯವನ್ನು ಆಕ್ರಮಿಸಿ ಸ್ವಲ್ಪಕಾಲ ರಾಜ್ಯಭಾರ ಮಾಡಿದರು. ಆದರೆ ಸ್ವಾಮಿಭಕ್ತ ಮಾಧವದಂಡನಾಥ ಕರ್ಣನನ್ನು ಕೊಂದು ಪುನಃ (1168) ಸೋಮಿದೇವನನ್ನು ಸಿಂಹಾಸನಕ್ಕೇರಿಸಿದ. ಸೋವಿದೇವ ಸಾರ್ವಭೌಮತ್ವದ ದ್ಯೋತಕವಾಗಿ ತನ್ನ ನಾಣ್ಯಗಳನ್ನು ಅಚ್ಚು ಹಾಕಿಸಿದ. ಇವನಿಗೆ ಕಳಚುರ್ಯ ಚಕ್ರವರ್ತಿ, ರಾಯಮುರಾರಿ ಮೊದಲಾದ ಬಿರುದುಗಳಿದ್ದವು. ಇವನಿಗೆ ಮಲ್ಲುಗಿ, ಸಂಕಮ, ಆಹವಮಲ್ಲ, ಸಿಂಘಣ ಎಂಬ ನಾಲ್ಕು ಜನ ಸೋದರರಿದ್ದರು. 1175 ರಲ್ಲಿ ಮಲ್ಲುಗಿ ದಂಗೆಯೆದ್ದು ಭೀಮಾನದಿಯ ದಡದಲ್ಲಿರುವ ಮಾಸನೂರಿನಿಂದ ಸ್ವತಂತ್ರನಾಗಿ ಆಳಲಾರಂಭಿಸಿದ. ಅದೇ ವರ್ಷ ಸಂಕಮನೂ ದಂಗೆಯೆದ್ದು ಬಿಜಾಪುರ ಪ್ರದೇಶದಲ್ಲಿ ಸ್ವತಂತ್ರನಾದ. ಸೋವಿದೇವನ ವಿಚಾರ 1176 ರ ಅನಂತರ ಏನೂ ತಿಳಿದುಬರುವುದಿಲ್ಲ. ಬಹುಶಃ ಆತ ಆ ವರ್ಷದಲ್ಲಿ ಸತ್ತಿರಬಹುದು. ಅನಂತರ ಮಲ್ಲುಗಿಯ ಹೆಸರೂ ಮರೆಯಾಗುತ್ತದೆ. ಸಂಕಮನೂ ಅವನ ತಮ್ಮಂದಿರಾದ ಅಹವಮಲ್ಲ ಮತ್ತು ಸಿಂಘಣರೂ 1184ರ ವರೆಗೂ ಅನುಕ್ರಮವಾಗಿ ರಾಜ್ಯವಾಳುತ್ತಿದ್ದರು. 1184 ರಲ್ಲಿ ಚಾಳುಕ್ಯ 4 ನೆಯ ಸೋಮೇಶ್ವರನ ದಂಡನಾಯಕ ಬಮ್ಮರಸ ಕಳಚುರ್ಯರನ್ನು ಓಡಿಸಿ ಸೋಮೇಶ್ವರನನ್ನು ಪುನಃ ಸಿಂಹಾಸನಕ್ಕೇರಿಸಿ ಚಾಳುಕ್ಯ ರಾಜ್ಯದ ಪುನರುದ್ಧಾರ ಮಾಡಿ ಚಾಲುಕ್ಯರಾಜ್ಯಪ್ರತಿಷ್ಠಾಪಕನೆಂಬ ಬಿರುದು ಪಡೆದ. ಈ ರೀತಿ ಕಲ್ಯಾಣದ ಕಳಚುರ್ಯರ ಅಲ್ಪಾವಧಿಯ ಆಕ್ರಮಣ ಕೊನೆಗೊಂಡಿತು.    

 

(ಎ.ವಿ.ಎನ್.; ಎಲ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ